ಕಿಂಗ್, ವಿಲಿಯಂ ಲೈಯನ್ ಮೆಕೆನ್‍ಜಿó

 1874-1950. ಕೆನಡದ ರಾಜ್ಯನೀತಿಜ್ಞ; ಮೂರು ಸಾರಿ ಪ್ರಧಾನಿಯಾಗಿದ್ದವ. ಆಂಟೇರಿಯೋ ಪ್ರಾಂತ್ಯಕ್ಕೆ ಸೇರಿದ ಬರ್ಲಿನ್‍ನಲ್ಲಿ (ಈಗ ಕಿಚೆನರ್) 1874ರ ಡಿಸೆಂಬರ್ 17ರಂದು ಜನಿಸಿದ. ವಿಲಿಯಂ ಲೈಯನ್ ಮಕೆನ್‍ಜಿóಯ ಮೊಮ್ಮಗನೀತ. ಟೊರಾಂಟೋ ವಿಶ್ವವಿದ್ಯಾಲಯದ ನ್ಯಾಯಶಾಸ್ತ್ರ ಪದವಿಯನ್ನು ಪಡೆದು, ಚಿಕಾಗೋ ಹಾಗೂ ಹಾರ್‍ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರೌಢವಿದ್ಯಾರ್ಥಿವೇತನ ಪಡೆದು, ತನ್ನ ವಿಶ್ವವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ. ಹೊಸದಾಗಿ ರಚಿತವಾದ ಕಾರ್ಮಿಕ ಇಲಾಖೆಯನ್ನು 1900ರಲ್ಲಿ ಸೇರಿ ಅದರ ಲೇಬರ್ ಗೆಜೆóಟ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ. ಕಾರ್ಮಿಕರಿಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವುದರಲ್ಲಿ ಈತನ ಕೌಶಲ ಪ್ರಕಟವಾಯಿತು. ಕಾರ್ಮಿಕ ಉಪಮಂತ್ರಿಯ ಹುದ್ದೆಗೆ ಈತ ರಾಜೀನಾಮೆ ಕೊಟ್ಟು 1908ರಲ್ಲಿ ಉತ್ತರ ವಾಟರ್ಲೂ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯಿಯಾದ. ಇದಕ್ಕೆ ಪ್ರತಿಯಾಗಿ ಕಿಂಗ್‍ಗೆ ಕಾರ್ಮಿಕ ಸಚಿವನ ಸ್ಥಾನ ಲಭ್ಯವಾಯಿತು (1909). ಸ್ವತಂತ್ರ ಉದ್ಯಮಕ್ಕೆ ಧಕ್ಕೆ ಬಾರದಂತೆ ಸಾರ್ವಜನಿಕರ ಹಿತ ರಕ್ಷಿಸುವುದೇ ಸರ್ಕಾರ ಅನುಸರಿಸಬಹುದಾದ ಸೂಕ್ತ ಪಾತ್ರ-ಎಂಬುದು ಈತನ ಅಭಿಪ್ರಾಯವಾಗಿತ್ತು. ಕೈಗಾರಿಕೆ ವಿವಾದಗಳ ಮತ್ತು ಉದ್ಯಮ ಕೂಟಗಳ ತನಿಖೆಗಳಿಗೆ ಸಂಬಂಧಿಸಿದ 1907ರ ಮತ್ತು 1910ರ ಕಾಯಿದೆಗಳು ಕಿಂಗನ ಪ್ರತಿಪಾದನೆಗೆ ಸಾಕ್ಷಿಗಳಾಗಿವೆ.

 1911ರ ಚುನಾವಣೆಗಳಲ್ಲಿ ಕಿಂಗ್ ಸೋತ, ಲಿಬರಲ್ ಪಕ್ಷದೊಂದಿಗೆ ತನ್ನ ಸಂಬಂಧ ಕಡಿದುಕೊಳ್ಳಲಿಲ್ಲವಾದರೂ ರಾಕ್‍ಫೆಲರ್ ಪ್ರತಿಷ್ಠಾನಕ್ಕೆ ಸಲಹೆಗಾರನಾಗಿ ಕೆಲಸ ಮಾಡಿದ. ಕಾಲೊರಾಡೋದಲ್ಲಿ ನಡೆದ ಒಂದು ಮುಷ್ಕರಕ್ಕೆ ಸಂಧಾನಕಾರನಾಗಿದ್ದ. 1919ರಲ್ಲಿ ಇವನ ಇಂಡಸ್ಟ್ರಿ ಅಂಡ್ ಹ್ಯೂಮಾನಿಟಿ ಎಂಬ ಪುಸ್ತಕ ಪ್ರಕಟವಾಯಿತು.

 1919ರಲ್ಲಿ ಕಿಂಗ್ ಲಿಬರಲ್ ಪಕ್ಷದ ನಾಯಕನಾಗಿ ಆಯ್ಕೆ ಹೊಂದಿದ. 1917ರಲ್ಲಿ ಬಲಾತ್ಕಾರ ಯೋಧ ಸಂಗ್ರಹಣದ ವಿಚಾರವಾಗಿ ಉದ್ಬವಿಸಿದ್ದ ವಿವಾದದಿಂದಾಗಿ ಛಿಧ್ರವಾಗಿದ್ದ ಪಕ್ಷವನ್ನು ಮತ್ತೆ ಕಟ್ಟುವ ಹೊಣೆ ಇವನದಾಯಿತು. ಬಲಾತ್ಕಾರ ಯೋಧಸಂಗ್ರಹಣದ ಪರವಾದ ಲಿಬರಲ್ ಸದಸ್ಯರ ಬೆಂಬಲವನ್ನು ಗಳಿಸುವುದರಲ್ಲಿ ಇವನಿಗೆ ಯಶಸ್ಸು ದೊರಕಿತು. 1921ರ ಚುನಾವಣೆಗಳಲ್ಲಿ ಜಯವೂ ಲಭ್ಯವಾಯಿತು. ಆ ವರ್ಷದ ಡಿಸೆಂಬರ್ 29ರಂದು ಕಿಂಗ್ ಕೆನಡದ ಪ್ರಧಾನಿಯಾದ.

 ಕಿಂಗನಿಗೆ ಸಂಸತ್ತಿನಲ್ಲಿ ಸ್ಥಿರವಾದ ಬಹುಮತ ಇರಲಿಲ್ಲ. ಇದಕ್ಕಾಗಿ ಈತ ಪ್ರೊಗ್ರೆಸಿವ್ಸ್ ಪಕ್ಷದ ಬೆಂಬಲ ಪಡೆಯಬೇಕಾಯಿತು. ಅದು ರೈತರ ಪಕ್ಷ. ಪಶ್ಚಿಮ ಕೆನಡದಲ್ಲಿ ಅದು ಪ್ರಬಲವಾಗಿತ್ತು. ತೆರಿಗೆ ಮತ್ತು ಸಾರಿಗೆ ದರಗಳನ್ನು ಇಳಿಸಿದ್ದು ಈ ಬೆಂಬಲ ದೊರಕಲು ಒಂದು ಕಾರಣ, ಕೆನಡ ಸ್ವಯಮಾಡಳಿತ ಪಡೆಯಬೇಕೆಂಬ ನೀತಿ ಅನುಸರಿಸಿದ್ದು ಇನ್ನೊಂದು ಕಾರಣ. ಆ ಸಮಯದಲ್ಲಿ ಬ್ರಿಟನ್-ತುರ್ಕಿಗಳ ನಡುವೆ ಯುದ್ಧ ಸಂಭವವಿತ್ತು. ಇದಕ್ಕಾಗಿ ಕೆನಡದ ಸೈನ್ಯಬೇಕೆಂದು ಬ್ರಿಟನ್ ಕೇಳಿತು. ಕೆನಡದ ಸೈನ್ಯವನ್ನು ಕಳುಹಿಸಲು ಕಿಂಗ್ ಒಪ್ಪಲಿಲ್ಲ. 1923ರಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದೊಂದಿಗೆ ಹ್ಯಾಲಿಬಟ್ ಫಿಷರೀಸ್ ಕೌಲು ಮಾಡಿಕೊಂಡ. 1923 ಮತ್ತು 1926ರಲ್ಲಿ ನಡೆದ ಸಾಮ್ರಾಜ್ಯ ಸಮ್ಮೇಳನದಲ್ಲಿ ಕೆನಡದ ಸ್ವಯಮಾಡಳಿತವನ್ನೇ ಸಮರ್ಥಿಸಿದ. 1925ರ ಚುನಾವಣೆಗಳಲ್ಲಿ ಕಿಂಗನ ಪಕ್ಷಕ್ಕೆ ಕೆಲವು ಸ್ಥಾನಗಳು ನಷ್ಟವಾದುವು. ಆದರೂ ಪ್ರ್ರೊಗ್ರೆಸಿವ್‍ಗಳ ಬೆಂಬಲದಿಂದ ಅಧಿಕಾರದಲ್ಲಿ ಮುಂದುವರಿದ. ಆದರೆ ಸುಂಕದ ಇಲಾಖೆಯಲ್ಲಿಯ ಭ್ರಷ್ಟಾಚಾರದ ಕುರಿತಾದ ಕೆಲವು ಸತ್ಯಸಂಗತಿಗಳು ಬಯಲಾದ್ದರ ಪರಿಣಾಮವಾಗಿ 1926ರಲ್ಲಿ ಪ್ರಧಾನಿಯ ಹುದ್ದೆಗೆ ರಾಜೀನಾಮೆ ನೀಡಿದ. ಅನಂತರ ಬಂದ ಕನ್ಸರ್ವೆಟಿವ್ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಸಂಸತ್ತಿನಲ್ಲಿ ಸೋಲಾಯಿತು. ಅನೇಕ ಪ್ರೊಗ್ರೆಸಿವ್‍ಗಳು ಕಿಂಗನ ಲಿಬರಲ್ ಪಕ್ಷ ಸೇರಿದರು. 1926ರ ಚುನಾವಣೆಗಳಲ್ಲಿ ಭದ್ರವಾದ ಬಹುಮತದೊಂದಿಗೆ ಕಿಂಗ್ ಮತ್ತೆ ಅಧಿಕಾರಕ್ಕೆ ಬಂದ.

 ಅನಂತರದ ಉಚ್ಛ್ರಾಯದ ವರ್ಷಗಳಲ್ಲಿ ಕಿಂಗನ ಆಡಳಿತ ಮೂಲತಃ ಸಂಪ್ರದಾಯವಾದಿಯಾಗಿತ್ತು. ಕ್ರಮಕ್ರಮವಾಗಿ ತೆರಿಗೆಗಳನ್ನು ಇಳಿಸಲಾಯಿತು. ಸರ್ಕಾರದವರ ಮಾನದ ಹೆಚ್ಚುವರಿಯನ್ನು ರಾಷ್ಟ್ರೀಯ ಋಣದ ತೀರ್ವೆಗೆ ಬಳಸಲಾಯಿತು. ವೃದ್ಧಾಪ್ಯವೇತನವನ್ನು ಜಾರಿಗೆ ಕೊಟ್ಟದ್ದು ಆ ಕಾಲದಲ್ಲೇ. ಪಶ್ಚಿಮದ ಪ್ರಾಂತ್ಯಗಳನ್ನು ರಚಿಸಿದಾಗ ಒಕ್ಕೂಟ ಸರ್ಕಾರದ ವಶದಲ್ಲಿದ್ದ ಸಾರ್ವಜನಿಕ ಭೂಸ್ವತ್ತುಗಳನ್ನು ಆ ಪ್ರಾಂತ್ಯಗಳಿಗೇ ವಹಿಸಿಕೊಡಲಾಯಿತು. ಆದರೆ ನಿರುದ್ಯೋಗ ಪರಿಹಾರಕ್ಕಾಗಲಿ, ಹೆದ್ದಾರಿಯ ನಿರ್ಮಾಣ ಕಾರ್ಯಕ್ಕಾಗಲಿ ಪ್ರಾಂತೀಯ ಸರ್ಕಾರಗಳಿಗೆ ನೆರವು ನೀಡಲು ಕಿಂಗ್ ನಿರಾಕರಿಸಿದ. 1930ರಲ್ಲಿ ಕಿಂಗ್‍ಗೆ ಸೋಲಾಯಿತು. ಕಿಂಗ್ ವಿರೋಧಪಕ್ಷದ ನಾಯಕನಾದ. ರಿಚರ್ಡ್ ಬೆನೆಟನ ಸಾಮಾಜಿಕ ಕಾನೂನಿಗೆ ಆತ ಸಮ್ಮತಿ ನೀಡಿದನಾದರೂ ಅದು ಸಂವಿಧಾನಬದ್ಧವಲ್ಲವೆಂದು ವಾದಿಸಿದ. ಅಧಿಕ ತೆರಿಗೆ ನೀತಿಗೂ ಸರ್ಕಾರದ ಅಧಿಕಾರಷಾಹಿಗೂ ಇವನ ತೀವ್ರ ವಿರೋಧವಿತ್ತು. ಲಿಬರಲ್ ಪಕ್ಷವನ್ನು ಕಿಂಗ್ ಮತ್ತೆ ಸಂಘಟಿಸಿದನಲ್ಲದೆ ಕಲ್ಯಾಣಸಾಧನೆಗಾಗಿ ಹಿತಮಿತವಾದ ಕಾನೂನು ತರಬಹುದೆಂಬುದು ಪಕ್ಷದ ಹೊಸ ಧೋರಣೆಯಾಯಿತು. 1935ರ ಚುನಾವಣೆಯಲ್ಲಿ ಕಿಂಗ್‍ಗೆ ಜಯ ಲಭಿಸಿತು. ವಿಶ್ವಾದ್ಯಂತ ಸಂಭವಿಸಿದ್ದ ಆರ್ಥಿಕ ಮುಗ್ಗಟ್ಟಿನ ಬಿರುಸು ಕೆನಡದಲ್ಲಿ ಇನ್ನೂ ಇತ್ತು. ಜೊತೆಗೆ ಪಶ್ಚಿಮದ ಪ್ರಾಂತ್ಯಗಳಲ್ಲಿ ಕೃಷಿ ಉತ್ಪನ್ನ ಕಡಿಮೆಯಾಗಿತ್ತು, ಕಿಂಗ್ ಅವಕ್ಕೆ ನೆರವು ನೀಡಿದ. ಬ್ರಿಟನ್ ಅಮೆರಿಕಗಳೊಡನೆ ವ್ಯಾಪಾರ ಒಪ್ಪಂದ ಮಾಡಿಕೊಂಡು ಕೆನಡದ ರಫ್ತನ್ನು ಅಧಿಕಗೊಳಿಸಬೇಕೆಂಬುದು ಅವನ ನೀತಿಯಾಗಿತ್ತು. ಕೆನಡದ ಸ್ವಯಮಾಡಳಿತ ನೀತಿಗೆ ಧಕ್ಕೆ ತರುವ ರೀತಿಯಲ್ಲಿ ಅಂತರರಾಷ್ಟ್ರೀಯ ವಿವಾದಗಳಲ್ಲಿ ಸಿಲುಕಿಕೊಳ್ಳುವುದು ಇವನ ಉದ್ದೇಶವಾಗಿರಲಿಲ್ಲ. ಆಕ್ರಮಣಶೀಲ ರಾಷ್ಟ್ರಗಳನ್ನು ತೃಪ್ತಿಪಡಿಸಿಯಾದರೂ ಯುದ್ಧವನ್ನು ತಡೆಗಟ್ಟಬೇಕೆಂಬುದು ಈತನ ಅಭಿಪ್ರಾಯವಾಗಿತ್ತು. ಈತ ಕೆನಡ-ಬ್ರಿಟನ್ ಸಂಬಂಧವನ್ನು ಇನ್ನಷ್ಟು ಬಿಗಿಗೊಳಿಸಿದ.

 1939ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದ ಮೇಲೆ, ಸೆಪ್ಟೆಂಬರ್ 10 ರಂದು, ಕೆನಡವೂ ಅಧಿಕೃತವಾಗಿ ಯುದ್ಧ ಘೋಷಿಸಿತು. ಬ್ರಿಟನಿನ ನೆರವಿಗೆ ಕೆನಡದ ಸರಕುಗಳೂ ಸೈನ್ಯವೂ ಲಭ್ಯವಾದುವು. ಆ ಜರೂರು ಸಂದರ್ಭದಲ್ಲಿ ಸಂಮಿಶ್ರ ಸರ್ಕಾರವೊಂದನ್ನು ರಚಿಸಬೇಕೆಂಬ ಒತ್ತಾಯವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಕಿಂಗ್ 1940ರಲ್ಲಿ ಚುನಾವಣೆಗಳನ್ನು ನಡೆಸಿದ. ಕಿಂಗ್ ಪಕ್ಷವೇ ಬಹುಮತದಿಂದ ವಿಜಯಗಳಿಸಿತು. ಬಲಾತ್ಕಾರ ಯೋಧ ಸಂಗ್ರಹಣವನ್ನು ಜಾರಿಗೆ ತರುವುದಿಲ್ಲವೆಂಬುದು ಕಿಂಗ್ ವಾಗ್ದಾನವಾಗಿತ್ತು. ಆದರೆ ಇಂಗ್ಲಿಷ್ ಸಂಜಾತ ಕೆನಡಿಯನರು ಇದಕ್ಕಾಗಿ ಒತ್ತಾಯಿಸಿದರು. ತತ್ಪಲವಾಗಿ ಕಿಂಗ್ ಆಗಾಗ ತನ್ನ ನಿರ್ಧಾರವನ್ನು ಸಡಿಲಗೊಳಿಸಬೇಕಾಯಿತು. 1942ರಲ್ಲಿ ನಡೆಸಿದ ಜನಮತ ಗಣನೆಯಲ್ಲಿ ಬಲಾತ್ಕಾರ ಯೋಧಸಂಗ್ರಹಣಕ್ಕೆ ಬಹುಮತ ಬಂತು. ಗೃಹರಕ್ಷಣೆಗಾಗಿ ಯೋಧರ ಬಲಾತ್ಕಾರ ಸಂಗ್ರಹಣೆ ಜಾರಿಗೆ ಬಂತು. ಸಾಗರಾಂತರ ಕ್ಷೇತ್ರಗಳಲ್ಲಿ ಯುದ್ಧ ಮಾಡುತ್ತಿದ್ದ ಸೈನಿಕರು ಹೆಚ್ಚು ಸಂಖ್ಯೆಯಲ್ಲಿ ಹತರಾದಾಗ ಆ ನಷ್ಟ ತುಂಬುವುದಕ್ಕೂ ಬಲಾತ್ಕಾರ ಸಂಗ್ರಹಣೆ ಅವಶ್ಯವಾಯಿತು. ರಾಷ್ಟ್ರರಕ್ಷಣಾ ಮಂತ್ರಿ ರಾಜೀನಾಮೆ ನೀಡಿದ. ಕಿಂಗ್ ಮನಸ್ಸಿಲ್ಲದೆ ವಿದೇಶಿ ಸೈನಿಕ ಸೇವೆಗೂ ಬಲಾತ್ಕಾರ ಸಂಗ್ರಹಣವನ್ನು ಭಾಗಶಃ ಜಾರಿಗೆ ತಂದ. ಆದರೆ ಈ ವಿಚಾರದಲ್ಲಿ ಕಿಂಗ್ ಅನುಸರಿಸಿದ ನಿಧಾನ ನೀತಿಯಿಂದಾಗಿ ಫ್ರೆಂಚ್ ಕೆನಡಿಯನರಿಗೆ ಸಮಾಧಾನವಾಯಿತು. ಬಲಾತ್ಕಾರ ಸಂಗ್ರಹಣವಾಗದಂತೆ ಮಾಡಲು ಕಿಂಗ್ ಶಕ್ತಿಮೀರಿ ಶ್ರಮಿಸಿದನೆಂಬುದು ಅವರಿಗೆ ಮನವರಿಕೆಯಾಗಿ ಅವರು ಸರ್ಕಾರದ ನಿರ್ಧಾರವನ್ನೊಪ್ಪಿಕೊಂಡರು.

 1945ರ ಚುನಾವಣೆಗಳಲ್ಲೂ ಕಿಂಗ್ ಜಯಶಾಲಿಯಾದ. ಯುದ್ಧದಿಂದ ಶಾಂತಿಯ ಅರ್ಥವ್ಯವಸ್ಥೆಗೆ ರಾಷ್ಟ್ರವನ್ನು ಪರಿವರ್ತನೆಗೊಳಿಸುವ ಕಾರ್ಯದ ಮೇಲೆ ಸೂಕ್ತಪರಿಶೀಲನೆ ನಡೆಸಿದ. ಅಂತರರಾಷ್ಟ್ರೀಯ ವಿಚಾರಗಳಲ್ಲಿ ಕೆನಡವೂ ಭಾಗವಹಿಸಬೇಕೆಂಬ ಸೂಚನೆಯನ್ನು ಕಿಂಗ್ ಒಪ್ಪಿದ. ವಿಶ್ವಸಂಸ್ಥೆ ಮತ್ತು ಉತ್ತರ ಅಟ್ಲಾಂಟಿಕ್ ಕೌಲು ಸಂಸ್ಥೆಗಳಲ್ಲಿ ಆ ರಾಷ್ಟ್ರವೂ ಪಾತ್ರ ವಹಿಸಿತು. ಅನಾರೋಗ್ಯದಿಂದಾಗಿ ಕಿಂಗ್ 1948ರಲ್ಲಿ ಪ್ರಧಾನಿಪದವಿಗೆ ರಾಜೀನಾಮೆ ನೀಡಿದ. ಈತ ತೀರಿಕೊಂಡದ್ದು 1950ರ ಜುಲೈ 22ರಂದು.

 ಕೆನಡ ರಾಷ್ಟ್ರದ ಐಕ್ಯಕ್ಕಾಗಿ ಶ್ರಮಿಸಿದ ವ್ಯಕ್ತಿ ಕಿಂಗ್. ಫ್ರೆಂಚ್ ಕೆನಡಿಯನರ ಸಂಸ್ಕøತಿಯನ್ನು ಗೌರವಿಸಿ ತನ್ಮೂಲಕ ಏಕತೆ ಸಾಧಿಸಿದ. ಮಂತ್ರಿ ಪದವಿಗೆ ಸಮರ್ಥರನ್ನು ಆರಿಸಿಕೊಂಡು, ಅವರ ಶಾಖೆಯ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ, ಸಚಿವ ಸಹೋದ್ಯೋಗಿಗಳ ವಿಶ್ವಾಸ ಮತ್ತು ಗೌರವವನ್ನು ಸಂಪಾದಿಸಿದ್ದ. ಉಚ್ಚ ಶಿಕ್ಷಣದಿಂದ ಪಡೆದ ಜ್ಞಾನ, ಕಾರ್ಮಿಕರಲ್ಲಿ ಅವನಿಗಿದ್ದ ಅಭಿಮಾನ, ಪ್ರಾಂತೀಯವಾದ ಸಮಸ್ಯೆಗಳು ಮತ್ತು ಹಿತಾಸಕ್ತಿಗಳನ್ನು ಬಗೆಹರಿಸುವುದರಲ್ಲಿ ಆತ ತೋರಿದ ಸಂಯಮಯುತ ಮಾರ್ಗದರ್ಶನ, ಯುದ್ಧವಿರೋಧಿ ಭಾವನೆ, ಅತಿರೇಕದಿಂದ ಕೂಡಿದ ಸಮಾಜವಾದಕ್ಕಿಂತ ಸಮಾಜಕಲ್ಯಾಣ ಕಾರ್ಯಕ್ರಮವೇ ಲೇಸು ಎಂಬ ಧೋರಣೆ, ನೆರೆಹೊರೆಯ ರಾಷ್ಟ್ರಗಳೊಡನೆ ಸ್ನೇಹ ಸಂಬಂಧವನ್ನು ವೃದ್ಧಿಗೊಳಿಸಿಕೊಳ್ಳಬೇಕೆಂಬ ನೀತಿ, ಸತ್ಯವನ್ನು ಒಪ್ಪಿ ಅಧಿಕಾರವನ್ನು ತ್ಯಜಿಸುವ ಪ್ರಾಮಾಣಿಕತೆ ಮತ್ತು ಸ್ನೇಹ ಭಾವನೆಗಳಿಂದಾಗಿ ಕಿಂಗ್ ಸುಮಾರು 22ವರ್ಷಗಳ ಕಾಲ ಕೆನಡದ ಶ್ರೇಷ್ಠ ರಾಜ್ಯ ನೀತಿಜ್ಞನಾಗಿ ಆ ರಾಷ್ಟ್ರದ ನಾಯಕತ್ವ ವಹಿಸಿದ್ದ.        

   (ಎಂ.ಬಿ.ಆರ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ